ಏನ್ಸ್‌ವರ್ತ್, ವಿಲಿಯಂ ಹ್ಯಾರಿಸನ್: 1805-82. ಇಂಗ್ಲಿಷ್ ಕಾದಂಬರಿಕಾರ. ಮ್ಯಾಂಚೆಸ್ಟರಿನ ವಕೀಲನೊಬ್ಬನ ಮಗ. ಗ್ರ್ಯಾಮರ್ ಶಾಲೆಯಲ್ಲಿ ಓದಿದ. ವಕೀಲಿಯಲ್ಲಿ ಆಸಕ್ತಿ ಇಲ್ಲದೆ ಸಾಹಿತ್ಯರಂಗಕ್ಕಿಳಿದ. ಪ್ರಕಾಶಕನೊಬ್ಬನ ಮಗಳನ್ನು ಮದುವೆಯಾಗಿ ತಾನೂ ಪ್ರಕಾಶಕನಾಗಿ 11 ತಿಂಗಳು ಕೆಲಸಮಾಡಿದ. 1834ರಲ್ಲಿ ಇವನ ಪ್ರಥಮ ಕಾದಂಬರಿ ರೂಕ್ವುಡ್ ಬೆಳಕಿಗೆ ಬಂತು. ಇದರಲ್ಲಿನ ಒಬ್ಬ ವ್ಯಕ್ತಿ ಡಿಕ್ ಟರ್ಪಿನ್ ಎಂಬಾತ ಯಾರ್ಕಿಗೆ ಬರುವ ದೃಶ್ಯ ಕಣ್ಣಿಗೆ ಕಟ್ಟುವಂತಿದೆ. 1881ರ ಸುಮಾರಿಗೆ ಈತನ 39 ಕೃತಿಗಳು ಪ್ರಕಾಶನಗೊಂಡಿದ್ದುವು. ಇವುಗಳಲ್ಲಿ ಅನೇಕ ಪುಸ್ತಕಗಳು ಬೆಂಟ್ಲೇಸ್ ಮಿಸಲೆನಿ, ಏನ್ಸ್‌ವರ್ತ್ ಮ್ಯಾಗಜಿûೕನ್ ಮತ್ತು ನ್ಯೂಮಂತ್ಲಿ ಎಂಬ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದುವು. ಇವುಗಳಲ್ಲಿ ಸಾಹಿತ್ಯ ದೃಷ್ಟಿಯಿಂದ ಪ್ರಸಿದ್ಧವಾದುವೆಂದರೆ ದಿ ಟವರ್ ಆಫ್ ಲಂಡನ್ (1840), ಗೈ ಫಾಕ್ಸ್‌ (1841), ಮೈಸರ್ಸ್ ಡಾಟರ್ (1842), ವಿಂಡ್ಸರ್ ಕ್ಯಾಸಲ್ (1843), ಸೇಂಟ್ ಜೇಮ್ಸ್‌ (1844). ಇವುಗಳೊಂದಿಗೆ ಕಿಚ್ಟನ್ (1837), ಓಲ್ಡ್‌ ಸೇಂಟ್ ಪಾಲ್ಸ್‌ (1841) ಮತ್ತು ಲ್ಯಾಂಕಷೈರ್ ವಿಚಸ್ (1848) ಗಳನ್ನೂ ಸೇರಿಸಬಹುದು.    			         (ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ